ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲ ಭಾಷೆಗಳಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟರೂ ಅದ್ಯಾಕೋ ಅವರಿಗೆ ಅವಕಾಶಗಳು ಕಡಿಮೆ ಎಂದರೆ ತಪ್ಪಿಲ್ಲ, ತೆಲುಗಿನಲ್ಲಿ ‘ಜೆರ್ಸಿ’ಯಂತಹ ಹಿಟ್ ಚಿತ್ರದ ಭಾಗವಾದರೂ ಆ ನಂತರ ಅವರು ಅಲ್ಲಿ ನಟಿಸಿದ್ದು ಕಡಿಮೆಯೇ. ಈಗ ಒಂದೆರಡು ವರ್ಷಗಳ ಗ್ಯಾಪ್‌ನ ನಂತರ ಶ್ರದ್ಧಾ ತೆಲುಗಿನ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದೇ ‘ಸೈಂಧವ’. ಇದು ವಿಕ್ಟರಿ ವೆಂಕಟೇಶ್ ಅಭಿನಯದ 75ನೇ ಚಿತ್ರವಾಗಿದ್ದು, ಕಳೆದ ತಿಂಗಳು ಪ್ರಾರಂಭವಾಗಿತ್ತು. ಆಗ ಚಿತ್ರದ ನಾಯಕಿಯ ಘೋಷಣೆಯಾಗಿರಲಿಲ್ಲ. ಈಗ ಚಿತ್ರತಂಡವು ಶ್ರದ್ಧಾ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಯಾರೆಂದು ಘೋಷಿಸಿದೆ. ಈ ಸಿನಿಮಾದಲ್ಲಿ ಮನೋಜ್ಞಾ ಎಂಬ ಪಾತ್ರದಲ್ಲಿ ಶ್ರದ್ಧಾ ಬಣ್ಣ ಹಚ್ಚಿದ್ದಾರೆ. ಸೀರೆಯುಟ್ಟು ಹೋಮ್ಮಿ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದು ಸೀರಿಯಸ್ ಲುಕ್‌ನಲ್ಲಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಭಾಗದ ಚಿತ್ರೀಕರಣದಲ್ಲಿ ಶ್ರದ್ಧಾ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣವಿದೆ.
