ಕೆಲವರ ಮೊದಲ ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲು ಇನ್ನಷ್ಟು ಅವಕಾಶಗಳು ಅರಸಿ ಬರುತ್ತವೆ. ಆ ಸಾಲಿಗೆ ಇದೀಗ ಪ್ರಿಯಾಂಕಾ ಕುಮಾರ್ ಸಹ ಸೇರುತ್ತಾರೆ. ಪ್ರಿಯಾಂಕಾ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಅವರು ಅಭಿನಯಿಸಿರುವ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಹಾಗೂ ವಿರಾಟ್ ಅಭಿನಯದ ‘ಅದ್ದೂರಿ ಲವರ್’ ಸಿನಿಮಾಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದು, ಎರಡೂ ಚಿತ್ರಗಳೂ ಇನ್ನಷ್ಟೇ ಬಿಡುಗಡೆಯಾಗಬೇಕಿವೆ. ಈ ಮಧ್ಯೆ, ಅವರು ಶ್ರೇಯಸ್ ಮಂಜು ಅಭಿನಯದ ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದ್ದು, ಮಧು ಗೌಡ ಗಂಗೂರು ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಲವ್ ಸ್ಟೋರಿಯಾಗಿದ್ದು, ಕಾಲೇಜ್ ಹುಡುಗಿಯಾಗಿ ಪ್ರಿಯಾಂಕಾ ನಟಿಸುತ್ತಿದ್ದಾರಂತೆ. ಅರ್ಜುನ್ ಜನ್ಯ ಸಂಗೀತ ಮತ್ತು ಗಗನ್ ಗೌಡ ಛಾಯಾಗ್ರಹಣವಿರುವ ಈ ಚಿತ್ರವನ್ನು ಏಷ್ಯಾನೆಟ್ ಮೂವೀ ಬ್ಯಾನರ್‌ನಡಿ ಆರ್. ಸಂತೋಷ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅಂದ ಹಾಗೆ, ಪ್ರಿಯಾಂಕಾ ಅಭಿನಯದ ಮೊದಲ ಚಿತ್ರ ‘ಬ್ಯಾಡ್ ಮ್ಯಾನರ್ಸ್ ಮೇನಲ್ಲಿ ಬಿಡುಗಡೆಯಾಗಲಿದೆ.
